ದುಬೈ : ನಾಳೆ ನಡೆಯಲಿರೋ 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ಹಾಗೂ ಆಸ್ಟ್ರೇಲಿಯಾ ಮಧ್ಯೆ ಮಹಾಕದನ ನಡೆಯಲಿದೆ. ಹೇಗಾದ್ರೂ ಮಾಡಿ ಆಸ್ಟ್ರೇಲಿಯಾ ತಂಡವನ್ನು ಸೋಲಿಸಿ ಹಳೆಯ ಸೇಡು ತೀರಿಸಿಕೊಳ್ಳಲು ರೋಹಿತ್ ಪಡೆ ಸಜ್ಜಾಗಿದೆ.

ಇತ್ತೀಚೆಗೆ ನಡೆದ ಚಾಂಪಿಯನ್ಸ್ ಟ್ರೋಫಿ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತ 44 ರನ್ಗಳಿಂದ ಗೆದ್ದು ಬೀಗಿತ್ತು. ಈ ಮೂಲಕ ಪಾಯಿಂಟ್ಸ್ ಟೇಬಲ್‌ನಲ್ಲಿ ರೋಹಿತ್ ಪಡೆ ಸದ್ಯ ಅಗ್ರ ಸ್ಥಾನದಲ್ಲಿದೆ.
ನಾಳೆ ನಡೆಯಲಿರುವ ಹೈವೋಲ್ಟೇಜ್ ಪಂದ್ಯದಲ್ಲಿ ಟೀಂ ಇಂಡಿಯಾ, ಆಸೀಸ್ ವಿರುದ್ಧ ಸೆಣಸಾಟ ನಡೆಸಲಿದ್ದು, ಈ ಪಂದ್ಯದಲ್ಲಿ ಹಿಂದೆ ಅನುಭವಿಸಿದ್ದ 2 ಸೋಲುಗಳ ಲೆಕ್ಕಾ ಚುಕ್ತ ಮಾಡಲು ಭಾರತ ಪ್ಲಾನ್ ಮಾಡಿಕೊಂಡಿದೆ.
ಹೌದು.. ಚಾಂಪಿಯನ್ಸ್ ಟ್ರೋಫಿ ಇತಿಹಾಸದಲ್ಲಿ ಎರಡೂ ತಂಡಗಳು ಸೆಮಿಫೈನಲ್‌ನಲ್ಲಿ ಮುಖಾಮುಖಿಯಾಗುತ್ತಿರುವುದು ಇದೇ ಮೊದಲು. ಆದ್ರೆ ಈ ಹಿಂದೆ ಹಲವು ಬಾರಿ ಐಸಿಸಿ ಮೆಗಾ ಟೂರ್ನಿ ಫೈನಲ್ ಪಂದ್ಯಗಳಲ್ಲಿ ಭಾರತ-ಆಸ್ಟ್ರೇಲಿಯಾ ಮುಖಾಮುಖಿ ಆಗಿವೆ. ಕಳೆದ ಎರಡು ಸಲ ಐಸಿಸಿ ಟೂರ್ನಿಗಳಲ್ಲಿ ಉಭಯ ತಂಡಗಳು ಸೆಣಸಾಡಿದ್ದವು. ಆ ಎರಡೂ ಪಂದ್ಯಗಳಲ್ಲಿ ಟೀಂ ಇಂಡಿಯಾ ಹೀನಾಯವಾಗಿ ಸೋಲು ಕಂಡಿದೆ.
ವಿಶ್ವಟೆಸ್ಟ್ ಚಾಂಪಿಯನ್ಶಿಪ್ ಫೈನಲ್ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ಸೋತಿತ್ತು. ಹಾಗೆಯೇ 2023ರ ಏಕದಿನ ವಿಶ್ವಕಪ್ ಫೈನಲ್ನಲ್ಲೂ ಭಾರತ, ಆಸ್ಟ್ರೇಲಿಯಾ ವಿರುದ್ಧ ಸೋತಿದೆ. ಇದರಿಂದ ಎರಡು ಸೋಲಿಗೆ ಸೇಡು ತೀರಿಸಿಕೊಳ್ಳಲು ಟೀಂ ಇಂಡಿಯಾ ಪ್ಲಾನ್ ಮಾಡಿಕೊಂಡಿದ್ದು, ನಾಳಿನ ಪಂದ್ಯದಲ್ಲಿ ಆಸ್ಟ್ರೇಲಿಯಾಗೆ ಮಣ್ಣು ಮುಕ್ಕಿಸಲು ಸುವರ್ಣಾವಕಾಶ ಇದಾಗಿದೆ.
