ಫರಿದಾಬಾದ್ : ಅಯೋಧ್ಯೆ ರಾಮ ಮಂದಿರದ ಮೇಲೆ ಹ್ಯಾಂಡ್ ಗ್ರೆನೇಡ್ ದಾಳಿ ನಡೆಸಲು ಸ್ಕೆಚ್ ಹಾಕಿದ್ದ ಶಂಕಿತ ಉಗ್ರನನ್ನು ಪೊಲೀಸರು ಬಂಧಿಸಿದ್ದಾರೆ.
ಹರಿಯಾಣದ ಫರಿದಾಬಾದ್‌ನಲ್ಲಿ ಅಬ್ದುಲ್ ರೆಹಮಾನ್ ಎಂಬಾತನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಉತ್ತರ ಪ್ರದೇಶದ ಫೈಜಾಬಾದ್ ಮೂಲದ ಅಬ್ದುಲ್ ರೆಹಮಾನ್, ಆಟೋ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಈತ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ಜೊತೆಗೆ ನಿರಂತರ ಸಂಪರ್ಕದಲ್ಲಿದ್ದ ಕಾರಣ ಈತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ರಾಮ ಮಂದಿರದ ಮೇಲೆ ದಾಳಿ ನಡೆಸಲು ಹಾಕಿದ್ದ ಸಂಚು ಬಹಿರಂಗವಾಗಿದೆ.

ರಾಮಮಂದಿರದ ಮೇಲೆ ಹ್ಯಾಂಡ್ ಗ್ರೆನೇಡ್ ಬಳಸಿ ದಾಳಿ ಮಾಡಿ ಭಾರಿ ವಿನಾಶವನ್ನುಂಟುಮಾಡುವುದು ಅಬ್ದುಲ್ ರೆಹಮಾನ್ ಸಂಚಾಗಿತ್ತು. ಪಿತೂರಿಯ ಭಾಗವಾಗಿ, ಅಬ್ದುಲ್ ಹಲವು ಬಾರಿ ರಾಮ ಮಂದಿರದ ಪರಿಶೀಲನೆ ನಡೆಸಿದ್ದ ಮತ್ತು ಈ ಎಲ್ಲಾ ಮಾಹಿತಿಯನ್ನು ಪಾಕಿಸ್ತಾನದ ಐಎಸ್‌ಐ ಜೊತೆ ಹಂಚಿಕೊಂಡಿದ್ದ.
ಅಬ್ದುಲ್ ಫೈಜಾಬಾದ್‌ನಿಂದ ರೈಲಿನಲ್ಲಿ ಫರಿದಾಬಾದ್ ಬಂದಿದ್ದು, ಅಲ್ಲಿ ಆತನಿಗೆ ವ್ಯಕ್ತಿಯೊಬ್ಬ ಹ್ಯಾಂಡ್ ಗ್ರೆನೇಡ್‌ಗಳನ್ನು ನೀಡಿದ್ದ. ಅದನ್ನು ತೆಗೆದುಕೊಂಡು ರೈಲಿನಲ್ಲಿ ಅಯೋಧ್ಯೆಗೆ ತೆರಳಿ ದಾಳಿ ಮಾಡುವ ಪ್ಲಾನ್ ಮಾಡಿಕೊಂಡಿದ್ದ.
ಆದರೆ ಕೇಂದ್ರ ಸಂಸ್ಥೆಗಳ ಮಾಹಿತಿಯ ಆಧಾರದ ಮೇಲೆ ಯೋಜನೆ ಯಶಸ್ವಿಯಾಗುವ ಮೊದಲು, ಗುಜರಾತ್ ಎಟಿಎಸ್ ಮತ್ತು ಫರಿದಾಬಾದ್ ಎಸ್‌ಟಿಎಫ್ ಶಂಕಿತ ಉಗ್ರ ಅಬ್ದುಲ್ನನ್ನು ಬಂಧಿಸಿದೆ.
ಇನ್ನು ವಿಚಾರಣೆ ವೇಳೆ ಪಾಲಿ ಪ್ರದೇಶದ ಒಂದು ಪಾಳುಬಿದ್ದ ಮನೆಯಲ್ಲಿ ಶಸ್ತ್ರಾಸ್ತ್ರಗಳನ್ನು ಇಟ್ಟಿರುವುದಾಗಿ ಅಬ್ದುಲ್ ಮಾಹಿತಿ ನೀಡಿದ್ದಾನೆ. ಈ ಮಾಹಿತಿ ಮೇರೆಗೆ ಸ್ಥಳಕ್ಕೆ ದಾಳಿ ನಡೆಸಿದ ಗುಜರಾತ್ ಎಟಿಎಸ್ ಮತ್ತು ಫರಿದಾಬಾದ್ ಪೊಲೀಸರು ನಾಲ್ಕು ಗಂಟೆಗಳ ಕಾಲ ಶೋಧ ನಡೆಸಿ ಎರಡು ಜೀವಂತ ಹ್ಯಾಂಡ್ ಗ್ರೆನೇಡ್‌ಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
