ದೆಹಲಿಯ ವಾಯು ಮಾಲಿನ್ಯ ನಿಯಂತ್ರಣಕ್ಕೆ ಬಿಜೆಪಿ ಕಠಿಣ ಕ್ರಮ – ಮಾ.31ರಿಂದ 15 ವರ್ಷದ ಹಳೇ ವಾಹನಗಳಿಗೆ ಇಂಧನ ಸಿಗಲ್ಲ!

ಕಳಪೆ ವಾಯುಗುಣಮಟ್ಟದಿಂದ ಉಸಿರುಗಟ್ಟುತ್ತಿರುವ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯುಮಾಲಿನ್ಯ ತಗ್ಗಿಸುವ ಸಲುವಾಗಿ ಬಿಜೆಪಿ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದೆ. ಮಾ.31ರಿಂದ 15 ವರ್ಷದ ಹಳೆಯ ವಾಹನಗಳಿಗೆ ಇಂಧನ ನೀಡಲಾಗುವುದಿಲ್ಲ ಎಂದು ಪರಿಸರ ಸಚಿವ ಮಜಿಂದರ್‌ ಸಿಂಗ್‌ ಸಿರ್ಸಾ ಘೋಷಿಸಿದ್ದಾರೆ. ಈ ಮೂಲಕ 3 ವರ್ಷ ಹಿಂದೆಯೇ ಜಾರಿಯಾಗಿದ್ದ ಈ ನೀತಿಯ ಕಟ್ಟುನಿಟ್ಟಿನ ಕ್ರಮದ ಅನುಷ್ಠಾನಕ್ಕೆ ನಿರ್ಧರಿಸಿದ್ದಾರೆ.

15 ವರ್ಷಕ್ಕೂ ಹಳೆಯ ವಾಹನಗಳ ಪತ್ತೆಗೆ ಪೆಟ್ರೋಲ್‌ ಪಂಪ್‌ಗಳಲ್ಲಿ ಉಪಕರಣಗಳನ್ನು ಅಳವಡಿಸಲಾಗುವುದು ಹಾಗೂ ಹಳೆ ವಾಹನಗಳಿಗೆ ಇಂಧನ ತುಂಬಿಸುವುದಿಲ್ಲ. ಈ ನಿರ್ಧಾರವನ್ನು ದೆಹಲಿ ಸರ್ಕಾರ ಕೇಂದ್ರ ಪೆಟ್ರೋಲಿಯಂ ಸಚಿವಾಲಯಕ್ಕೆ ತಿಳಿಸಲಿದೆ ಎಂದಿದ್ದಾರೆ. ಜೊತೆಗೆ ಎತ್ತರದ ಕಟ್ಟಡ, ಹೋಟೆಲ್‌, ವಾಣಿಜ್ಯ ಸಂಕೀರ್ಣಗಳಲ್ಲಿ ಹೊಗೆ ವಿರೋಧಿ ಗನ್‌ಗಳನ್ನು ಕಡ್ಡಾಯವಾಗಿ ಅಳವಡಿಸಬೇಕು ಎಂದು ಸೂಚಿಸಿದ್ದಾರೆ.

ಡಿಸೆಂಬರ್ 2025 ರ ವೇಳೆಗೆ ದೆಹಲಿಯಲ್ಲಿ ಸುಮಾರು ಶೇಕಡ 90 ರಷ್ಟು ಸಾರ್ವಜನಿಕ ಸಿಎನ್‌ಜಿ ಬಸ್‌ಗಳನ್ನು ಹಂತಹಂತವಾಗಿ ಸ್ಥಗಿತಗೊಳಿಸಲಾಗುವುದು ಮತ್ತು ಅವುಗಳನ್ನು ವಿದ್ಯುತ್ ಬಸ್‌ಗಳೊಂದಿಗೆ ಬದಲಾಯಿಸಲಾಗುವುದು ಎಂದು ಅವರು ತಿಳಿಸಿದರು.

ದೆಹಲಿಯಲ್ಲಿ 10 ವರ್ಷಕ್ಕಿಂತ ಹಳೆಯದಾದ ಡೀಸೆಲ್ ವಾಹನಗಳು ಮತ್ತು 15 ವರ್ಷಕ್ಕಿಂತ ಹಳೆಯದಾದ ಪೆಟ್ರೋಲ್ ವಾಹನಗಳನ್ನು ರಸ್ತೆಗಳಲ್ಲಿ ಅನುಮತಿಸುವುದಿಲ್ಲ ಎಂಬ ನೀತಿ ಇದೆ. 2021ರ ಆದೇಶದ ಪ್ರಕಾರ, ಜನವರಿ 1, 2022ರ ನಂತರ ರಸ್ತೆಗಳಲ್ಲಿ ಅಂಥ ವಾಹನಗಳ ಸಂಚಾರ ಕಂಡುಬಂದರೆ ಅವುಗಳನ್ನು ಮುಟ್ಟುಗೋಲು ಹಾಕಿಕೊಂಡು ಸ್ಕ್ರ್ಯಾಪ್‌ಯಾರ್ಡ್‌ಗೆ ಕಳುಹಿಸಲಾಗುವುದು ಎಂಬ ಕಾನೂನು ಮಾಡಲಾಗಿದೆ.

ಇದನ್ನೂ ಓದಿ : https://btvkannada.com/2025/03/02/bangalore-80-crore-government-land-seize-dc-jagadish/

Btv Kannada
Author: Btv Kannada

Leave a Comment

Read More

Read More