144 ವರ್ಷಗಳಿಗೊಮ್ಮೆ ನಡೆಯುವ ಮಹಾ ಕುಂಭಮೇಳಕ್ಕೆ ಶಿವರಾತ್ರಿಯಂದು ವಿದ್ಯುಕ್ತ ತೆರೆ ಬಿದ್ದಿದೆ. ಜಗತ್ತಿನ ಮೂಲೆ ಮೂಲೆಯಿಂದ ಬಂದ ಕೋಟಿ ಕೋಟಿ ಭಕ್ತರು ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ಮಾಡಿದ್ದಾರೆ. ಈ ನಡುವೆ ಮುಂದಿನ ಕುಂಭಮೇಳ ಎಲ್ಲಿ ನಡೆಯಲಿದೆ ಅನ್ನೋ ಅಪ್ಡೇಟ್ ಕೂಡ ಸಿಕ್ಕಿದೆ.

ಈ ಬಾರಿ ಈ ಮಹಾ ಕುಂಭಮೇಳದಲ್ಲಿ ಸುಮಾರು 66.30 ಕೋಟಿಗೂ ಹೆಚ್ಚು ಭಕ್ತರು ತ್ರಿವೇಣಿ ಸಂಗಮದಲ್ಲಿ ಮಿಂದೆದ್ದಿದಾರೆ. 40 ಕೋಟಿ ಜನರ ಆಗಮನದ ನಿರೀಕ್ಷೆಯಿಟ್ಟಿದ್ದ ಉತ್ತರ ಪ್ರದೇಶ ಸರ್ಕಾರದ ಲೆಕ್ಕಾಚಾರವೇ ತಲೆಕೆಳಗಾಗುವಂತೆ ಮಾಡಿದೆ. ಬಾಲಿವುಡ್ ಸೆಲೆಬ್ರಿಟಿಗಳಿಂದ ಹಿಡಿದು ಪ್ರಪಂಚದ ಮೂಲೆ ಮೂಲೆಯಿಂದ ಬಂದ ಕೋಟಿ ಕೋಟಿ ಭಕ್ತರು ಪವಿತ್ರ ಸ್ನಾನ ಮಾಡಿದ್ದಾರೆ. ಕೊನೆಯ ದಿನವಾದ ನಿನ್ನೆ 1 ಕೋಟಿ 53 ಲಕ್ಷ ಭಕ್ತರು ಗಂಗೆಯಲ್ಲಿ ಮಿಂದೆದ್ದಿದ್ದಾರೆ.

ಮಹಾ ಕುಂಭಮೇಳದಿಂದ ಭಾರತದ ಆರ್ಥಿಕತೆಗೆ 3 ಲಕ್ಷ ಕೋಟಿ ರೂ. ಆದಾಯ :
144 ವರ್ಷಗಳಿಗೊಮ್ಮೆ ನಡೆದ ಮಹಾ ಕುಂಭಮೇಳ ಭಾರತದ ಆರ್ಥಿಕತೆಗೆ ಮತ್ತಷ್ಟು ಬಲ ತಂದಿದ್ದು, 45 ದಿನಗಳ ಈ ಧಾರ್ಮಿಕ ಕಾರ್ಯಕ್ರಮದಿಂದ ಉತ್ತರ ಪ್ರದೇಶ ಸರ್ಕಾರಕ್ಕೆ 3 ಲಕ್ಷ ಕೋಟಿ ರೂ. ಆದಾಯ ತಂದಿದೆ ಎಂದು ಅಂದಾಜಿಸಲಾಗಿದೆ. 10 ಕೋಟಿ ಜನರಿಗೆ ಉದ್ಯೋಗವೂ ನೀಡಿದೆ. ಇನ್ನು ಸಾಕಷ್ಟು ಸವಾಲುಗಳ ನಡುವೆಯೂ ಯಶಸ್ವಿಯಾಗಿ ಮಹಾಕುಂಭ ಮೇಳ ಅಂತ್ಯವಾಗಿದ್ದು, ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಅವರು ಈ ಯಶಸ್ಸಿಗೆ ಕಾರಣರಾದ.. ಕುಂಭಮೇಳದಲ್ಲಿ ಪಾಲ್ಗೊಂಡ ಪ್ರತಿಯೊಬ್ಬರಿಗೂ ಧನ್ಯವಾದ ಅರ್ಪಿಸಿದ್ದಾರೆ.

ಮುಂದಿನ ಕುಂಭ ಎಲ್ಲಿ..?
- 3 ವರ್ಷಕ್ಕೊಮ್ಮೆ ನಾಲ್ಕು ಪವಿತ್ರ ಕ್ಷೇತ್ರಗಳಲ್ಲಿ ಕುಂಭಮೇಳ
- ಪ್ರಯಾಗ್ರಾಜ್, ಹರಿದ್ವಾರ, ಉಜ್ಜೈನಿ ಹಾಗೂ ನಾಸಿಕ್
- ಮುಂದಿನ ಪೂರ್ಣ ಕುಂಭಮೇಳ 2027ಕ್ಕೆ ನಾಸಿಕ್ನಲ್ಲಿ
- 12 ವರ್ಷಗಳ ಹಿಂದೆ ನಾಸಿಕ್ನಲ್ಲಿ ಪೂರ್ಣಕುಂಭ ನಡೆದಿತ್ತು
- ಮುಂದಿನ ಕುಂಭ ಗೋದಾವರಿ ನದಿ ತೀರದಲ್ಲಿ ನಡೆಯಲಿದೆ
